ಕಾರ್ಕ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವಿಶಾಲಾರ್ಥದಲ್ಲಿ ಹೇಳುವುದಾದರೆ ನಿರ್ದಿಷ್ಟ ಆಕಾರವಿಲ್ಲದ ತೆಳುವಾದ ಕೋಶಭಿತ್ತಿಯುಳ್ಳ. ಮೇಣದಂಥ ಸೂಬರಿನ್ ಎಂಬ ವಸ್ತುವಿನ ಹೊದಿಕೆಯುಳ್ಳ ಅನೇಕ ಮರಗಳ ಹೊರ ತೊಗಟೆ. ಆದರೆ ನಿಷ್ಕøಷ್ಟ ಅರ್ಥದಲ್ಲಿ ಓಕ್ ಮರದ ತೊಗಟೆಗೆ ಈ ಹೆಸರಿದೆ. ಈ ಮರದ ಶಾಸ್ತ್ರೀಯ ಹೆಸರು ಕ್ವರ್ಕಸ್ ಸೂಬರ್ (ನೋಡಿ- ಓಕ್). ಮೆಡಿಟರೇನಿಯನ್ ಪ್ರದೇಶ ಈ ಮರದ ತವರು. ಪೋರ್ಚುಗಲ್, ಸ್ಪೇನ್, ದಕ್ಷಿಣ ಫ್ರಾನ್ಸ್, ಇಟಲಿ, ಉತ್ತರ ಆಫ್ರಿಕದ ಟ್ಯುನಿಸಿಯ, ಆಲ್ಜೀರಿಯ ಮತ್ತು ಮೊರಾಕೋಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಈ ದೇಶಗಳಲ್ಲಿ 2,000,000 ಎಕರೆಗಳ ಕಾರ್ಕ್ ಮರದ ಕಾಡುಗಳಿವೆ.

 ಕಾರ್ಕ್‍ಮರದ ಒಳತೊಗಟೆ ವಿಭಜನಶಕ್ತಿಯುಳ್ಳ ಕಾರ್ಕ್ ಕೇಂಬಿಯಮ್ ಎಂಬ ಅಂಗಾಂಶವನ್ನು ಉತ್ಪತ್ತಿಮಾಡುತ್ತದೆ. ಈ ಅಂಗಾಂಶ ತನ್ನ ಒಳ ಹಾಗೂ ಹೊರ ಭಾಗಗಳೆರಡರ ಕಡೆಗೂ ಆನುಷಂಗಿಕ ಅಂಗಾಂಶಗಳನ್ನು ಉತ್ಪಾದಿಸುತ್ತದೆ. ಹೊರ ಭಾಗದಲ್ಲಿ ರೂಪುಗೊಂಡ ಅಂಗಾಂಶವೇ ಕಾರ್ಕ್. ಇದನ್ನು ಮರದಿಂದ ಆಗಾಗ ಕತ್ತರಿಸಿ ತೆಗೆದುಕೊಳ್ಳಬೇಕು. ಮೊದಲಿನ ಎರಡು ಸಲ ಹೀಗೆ ತೆಗೆಯಲಾದ ಕಾರ್ಕ್ ಅಷ್ಟು ಉತ್ತಮ ಮಟ್ಟದ್ದಾಗಿರುವುದಿಲ್ಲ. ಆಮೇಲಿನವು ಉತ್ತಮ ದರ್ಜೆಯವಾಗಿದ್ದು ವಿವಿಧೋದ್ದೇಶಗಳಿಗೆ ಉಪಯೋಗವಾಗುತ್ತವೆ.

ಕಾರ್ಕಿಗೆ ಅಪೇಕ್ಷಣೀಯವಾದ ಹಲವಾರು ವಿಶೇಷ ಗುಣಗಳಿವೆ. ಇವುಗಳಲ್ಲಿ ಅದರ ತಗ್ಗು ಮಟ್ಟದ ವಿಶಿಷ್ಟ ಸಾಂದ್ರತೆ (ಸ್ಪೆಸಿಫಿಕ್ ಗ್ರಾವಿಟಿ). ಸಂಕುಚಿತತೆ (ಕಂಪ್ರೆಸಿಬಿಲಿಟಿ), ಪುಟಿತತೆ (ಇಲ್ಯಾಸ್ಟಿಸಿಟಿ), ನೀರು ಮತ್ತು ಗಾಳಿಗೆ ಅಪಾರಗಮ್ಯತೆ. ತಗ್ಗುಮಟ್ಟಿದ ಉಷ್ಣವಾಹಕತ್ವ ಮತ್ತು ಸುಲಭವಾಗಿ ಹಾಳಾಗದಿರುವಿಕೆ ಮುಂತಾದ ಗುಣಗಳು ಮುಖ್ಯವಾದವು. ಅಲ್ಲದೆ ಇದು ರಾಸಾಯನಿಕವಾಗಿ ಜಡವಾಗಿರುವುದರಿಂದ ಆಮ್ಲ ಕ್ಷಾರ ಅಥವಾ ಜೈವಿಕ ದ್ರವ ವಸ್ತುಗಳು ಇದರ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಇವೆಲ್ಲ ಗುಣಗಳಿಂದಾಗಿ ಕಾರ್ಕನ್ನು ವಿವಿಧ ಬಗೆಯ ಕೆಲಸಗಳಿಗೆ ಉಪಯೋಗಿಸುತ್ತಾರೆ.

ಮುಖ್ಯವಾಗಿ ಸೀಸೆಗಳ ಬಿರಡೆಯಾಗಿ, ದಾರ ತಂತಿ ಮುಂತಾದವನ್ನು ಸುತ್ತುವ ಉರಳೆಗಳಾಗಿ, ಯಂತ್ರಭಾಗಗಳಲ್ಲಿ ಉಷ್ಣನಿರೋಧಕ ಹೊದಿಕೆಯಾಗಿ ಕಾರ್ಕ್ ಉಪಯೋಗುವಾಗುತ್ತದೆ. ಅಲ್ಲದೆ ಪಾದರಕ್ಷೆಗಳ ತಳಗಳು ಚಾಪೆಗಳು, ಕೃತಕ ಕೈ ಕಾಲುಗಳು, ಪೆಟ್ಟಿಗೆ ಟೋಪಿ ಮುಂತಾದವುಗಳ ಒಳಪದರದ ತಯಾರಿಕೆಯಲ್ಲಿಯೂ ಈಜುಬುರುಡೆಗಳು ಮುಂತಾದುವನ್ನು ಮಾಡಲೂ ಇದನ್ನು ಬಳಸುತ್ತಾರೆ. ಕಾರ್ಕನ್ನು ಕೊರೆಯುವಾಗ ಉಳಿಯುವ ಕಳಪೆ ಭಾಗಗಳನನ್ನು ಉಷ್ಣ, ವಿದ್ಯುತ್ತುಗಳನ್ನು ತಡೆಯುವ ಅವಾಹಕ ವಸ್ತುವಾಗಿ ಉಪಯೋಗಿಸುತ್ತಾರೆ.

ಮರಕ್ಕೆ 20 ವರ್ಷ ವಯಸ್ಸಾದ ಮೇಲೆ ಕಾರ್ಕನ್ನು ತೆಗೆಯುತ್ತಾರೆ. ಸುಮಾರು 150 ವರ್ಷ ಬಾಳುವ ಈ ಮರದಿಂದ 8-10 ವರ್ಷಗಳಿಗೊಮ್ಮೆಯಂತೆ ಕಾರ್ಕ್ ತೆಗೆಯ ಬಹುದು. ಕಾರ್ಕ್‍ನ್ನು ತೆಗೆಯುವಾಗ ತೊಗಟೆಯನ್ನು ಉದ್ದನೆಯಪಟ್ಟಿಗಳಾಗಿ ಬೇರ್ಪಡಿಸಿ, ಕಂತೆ ಕಟ್ಟಿ ಹಲವಾರು ವಾರಗಳ ಕಾಲ ಒಣಗಲು ಬಿಡುತ್ತಾರೆ. ಅನಂತರ ಅದನ್ನು ನಿರಿನಲ್ಲಿ ಕುದಿಸುತ್ತಾರೆ. ಇದರಿಂದ ಅದರಲ್ಲಿರುವ ಟ್ಯಾನಿಸ್ ಮುಂತಾದ ವಸ್ತುಗಳು ಪ್ರತ್ಯೇಕಗೊಳ್ಳುತ್ತವೆ. ಆಮೇಲೆ ಒಣಗಿಸಿ, ಬೇಕಾದ ಗಾತ್ರಕ್ಕೆ ಕತ್ತರಿಸಿ ಉಪಯೋಗಿಸುತ್ತಾರೆ.

ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಮಿಲಿಂಗ್‍ಟೋನಿಯ ಹಾರ್ಟೆನ್ಸಿಸ್ ಎಂಬ ಮರದಿಂದಲೂ ಕೆಳದರ್ಜೆಯ ಕಾರ್ಕನ್ನು ತೆಗೆಯುತ್ತಾರೆ. ಈ ಮರಕ್ಕೆ ಬಿರಟು ಮರ ಎಂಬ ಕನ್ನಡ ಹೆಸರೂ ಇಂಡಿಯನ್ ಕಾರ್ಕ್ ಟ್ರೀ ಎಂಬ ಸಾಮಾನ್ಯ ಬಳಕೆಯ ಇಂಗ್ಲಿಷಿನ ಹೆಸರೂ ಇವೆ.

(ಪಿ.ಕೆ.ಆರ್.ಜೆ.)